ಆನೆಗೊಂದಿ ಎಂದಾಕ್ಷಣ ಥಟ್ಟನೆ ಮನಸ್ಸಿನಲ್ಲಿ ಮೂಡಿಬರುವ ಹೆಸರುಗಳೆಂದರೆ ಹಂಪಿ ಹಾಗೂ ರಾಮಾಯಣದ ಕಿಷ್ಕಿಂದೆ. ಸಂಶೋಧಕರು, ಇತಿಹಾಸ ತಜ್ಞರ ಪ್ರಕಾರ ಆನೆಗೊಂದಿ ಅತ್ಯಂತ ಮಹತ್ವ ಪಡೆದಿರುವ ಪ್ರದೇಶ. ರಾಮಾಯಣ ಎಂದರೆ ಅದರಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕಿಷ್ಕಿಂದೆಯೇ ಈಗಿನ ಆನೆಗೊಂದಿ ಎಂದು ನೆನಪಿಸಿಕೊಂಡರೆ ಒಂದು ಕ್ಷಣ ರೋಮಾಂಚನದ ಅನುಭವ ನೀಡುವುದು ಸತ್ಯ. ಅದೇ ರೀತಿ ಇತಿಹಾಸದಲ್ಲಿಯೇ ಸುವರ್ಣಯುಗವೆಂದು ಬಣ್ಣಿಸಲಾಗಿರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯೇ ಆಗಿತ್ತು ಎಂದು ತಿಳಿದರಂತೂ ಈ ಪ್ರದೇಶದ ಬಗ್ಗೆ ತಿಳಿದುಕೊಳ್ಳಲು ಮತ್ತಷ್ಟು ಆಸಕ್ತಿ ಮೂಡುತ್ತದೆ.
ತುಂಗಭದ್ರಾ ನದಿಯ ತಟದಲ್ಲಿರುವ ಕಲ್ಲು, ಗುಡ್ಡಗಳ ಪ್ರದೇಶಗಳ ನಡುವೆ ಇರುವ ಆನೆಗೊಂದಿ ಎಂಬ ಪುಟ್ಟ ಗ್ರಾಮದ ಬಳಿ ಅಲ್ಲಲ್ಲಿ ಕಾಣಸಿಗುವ ಹಲವಾರು ಸ್ಮಾರಕಗಳು, ರಾಮಾಯಣ ಸೇರಿದಂತೆ ವಿಜಯನಗರ ಸಾಮ್ರಾಜ್ಯದ ಗತವೈಭವಕ್ಕೆ ಸಾಕ್ಷಿಯಾಗಿವೆ. ಈ ಭಾಗದ ಅಂಜನಾದ್ರಿ ಪರ್ವತ, ಪಂಪಾ ಸರೋವರ, ಋಷ್ಯಮುಖ ಪರ್ವತ, ಗಗನ ಮಹಲ್, ಚಿಂತಾಮಣಿ, ದುರ್ಗಾದೇವಿ ಮಂದಿರ ಮುಂತಾದವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ರಾಮಾಯಣದಲ್ಲಿ ಬರುವ ವಾನರ ಸಾಮ್ರಾಜ್ಯ ಕಿಷ್ಕಿಂದೆ, ಈಗಿನ ಆನೆಗೊಂದಿ ಭಾಗದ ಪ್ರದೇಶವೇ ಆಗಿದೆ ಎನ್ನುತ್ತವೆ ಪೌರಾಣಿಕ ಕಥೆಗಳು, ಕಿಷ್ಕಿಂದೆ ಎಂದರೆ ಕಿರಿದಾದ, ಇಕ್ಕಟ್ಟಾದ ಎನ್ನುವ ಅರ್ಥವಿದೆ. ಹಂಪಿಯ ಪರಿಸರದಲ್ಲಿನ ಆನೆಗೊಂದಿಯನ್ನು ವೀಕ್ಷಿಸಿದರೆ, ಇಲ್ಲಿನ ಬೆಟ್ಟ, ಗುಡ್ಡ, ಕಲ್ಲುಗಳಿಂದ ಆವೃತವಾಗಿ ಇಕ್ಕಟ್ಟಾಗಿದೆ ಎನಿಸದೇ ಇರದು. ಕಣ್ಣಿಗೆ ಕಾಣುವಷ್ಟು ದೂರದವರೆಗೂ ಕಲ್ಲು, ಗುಡ್ಡಗಳ ಸಾಲುಗಳು, ಚಿತ್ರ ವಿಚಿತ್ರಾಕೃತಿಯ ಬೃಹತ್ ಗಾತ್ರದ ಕಲ್ಲು ಗುಂಡುಗಳು, ಎಲ್ಲಿ ಕುಸಿದು ಬೀಳುತ್ತವೆಯೋ ಎನ್ನುವಂತೆ ಕಾಣಿಸಿದರೂ, ಅಲ್ಲಲ್ಲಿ ಜೋಡಿಸಿಟ್ಟಿರುವಂತೆ ಕಾಣುವ ದೊಡ್ಡ ದೊಡ್ಡ ಕಲ್ಲು ಬಂಡೆಗಳು, ಇವೆಲ್ಲದರ ಮಧ್ಯೆ ಹರಿವ ತುಂಗಭದ್ರಾ ನದಿ. ಇವೆಲ್ಲವೂ ಸೇರಿ ಇಡೀ ಆನೆಗೊಂದಿ ಪ್ರದೇಶವನ್ನು ಒಂದು ರೀತಿಯಲ್ಲಿ ನೈಸರ್ಗಿಕ ವಿಸ್ಮಯ ಸೃಷ್ಟಿಯಾಗಿಸಿದೆ. ಅಲ್ಲದೆ ಈ ಭಾಗದ ಪರಿಸರ ಮನಸ್ಸಿಗೆ ಮುದ ನೀಡುತ್ತದೆ. ಇವೆಲ್ಲ ಕಾರಣಗಳಿಗಾಗಿಯೇ ಆನೆಗೊಂದಿ ಭಾಗಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ.
ಆನೆಗೊಂದಿಯನ್ನು ಕೆಲವರು ಆನೆಗುಂದಿ ಎಂಬುದಾಗಿಯೂ ಕರೆಯುತ್ತಾರೆ. ಆದರೆ ಆನೆಗೊಂದಿ ಎಂಬುದೇ ಸೂಕ್ತ ಹಾಗೂ ಸರಿಯಾದ ಹೆಸರಾಗಿದೆ ಎಂಬುದು ತಜ್ಞರ ವಾದ. ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಗ್ರಾಮದ ನಾಲ್ಕು ದಿಕ್ಕುಗಳಿಗೂ ನಾಲ್ಕು ಮುಖ್ಯ ದ್ವಾರಗಳಿವೆ. ಈ ಪೈಕಿ ಸದ್ಯ ಎರಡು ದ್ವಾರಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಉಳಿದೆರಡು ಶಿಥಿಲಾವಸ್ಥೆಗೆ ತಲುಪಿವೆ. ಇಲ್ಲಿನ ಶ್ರೀರಂಗನಾಥ ಸ್ವಾಮಿಯ ವಿಶಾಲ ದೇವಾಲಯವಿದ್ದು, ಪ್ರವೇಶದ್ವಾರ, ನೃತ್ಯಮಂಟಪ, ಗರ್ಭಗುಡಿ, ಪ್ರವಾಸಿಗರಲ್ಲಿ ಭಕ್ತಿಯ ಭಾವ ಮೂಡಿಸುತ್ತದೆ. ಆನೆಗೊಂದಿ ಗ್ರಾಮವನ್ನು ಪ್ರವೇಶಿದರೆ, ಇಲ್ಲಿಯೇ ಸ್ವಲ್ಪ ದೂರದಲ್ಲಿ ಇರುವ ಗಗನ ಮಹಲ್ ನೋಡಲು ಆಕರ್ಷಕವಾಗಿದೆ. ಇಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಕೂಡಲೆ ತೆರವುಗೊಳಿಸುವಂತೆ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯೆಲ್ ಅವರು ಇತ್ತೀಚೆಗೆ ಆನೆಗೊಂದಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಆನೆಗೊಂದಿ ಗ್ರಾಮದ ಪಕ್ಕದಲ್ಲಿಯೇ ಇರುವ ಬೃಹತ್ ಪರ್ವತದಲ್ಲಿ ಶ್ರೀ ದುರ್ಗಾ ದೇವಿಯ ದೇವಸ್ಥಾನವಿದ್ದು, ಹಬ್ಬ, ಹರಿದಿನಗಳಲ್ಲಿ, ಅಮಾವಸ್ಯೆ, ಹುಣ್ಣಿಮೆಯ ದಿನಗಳಂದು, ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕ. ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಹಾಗೂ ಆಕರ್ಷಕವಾಗಿರುವ ಆನೆಗೊಂದಿ ಕೋಟೆಯ ಮಹಾದ್ವಾರ ಇಲ್ಲಿಯೇ ಸಮೀಪದಲ್ಲಿದೆ. ಇದು ಪ್ರವಾಸಿಗರ ಆಕರ್ಷಣೀಯ ಕೇಂದ್ರವೂ ಕೂಡ ಆಗಿದೆ. ಇಲ್ಲಿಂದ ಸ್ವಲ್ಪ ದೂರ ಕ್ರಮಿಸಿದರೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನೆಗಳನ್ನು ಕಟ್ಟಿ ಹಾಕುತ್ತಿದ್ದ ಆನೆಲಾಯ ಮತ್ತು ಕುದುರೆಲಾಯಗಳನ್ನು ವೀಕ್ಷಿಸಬಹುದಾಗಿದೆ.

ಆನೆಗೊಂದಿಯಿಂದ ಸಾಣಾಪುರ ಮಾರ್ಗದಲ್ಲಿ ಸ್ವಲ್ಪ ಒಳಮಾರ್ಗದಲ್ಲಿ ತೆರಳಿದರೆ ಪ್ರಸಿದ್ಧ ಪಂಪಾ ಸರೋವರ ನೋಡಬಹುದು. ದೇಶದಲ್ಲಿನ ಅತ್ಯಂತ ಪವಿತ್ರ ಸರೋವರಗಳ ಪೈಕಿ ಇಲ್ಲಿನ ಪಂಪಾ ಸರೋವರ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಇದು ಅತ್ಯಂತ ಆಕರ್ಷಕವಾಗಿದ್ದು, ಸರೋವರದ ತಟದಲ್ಲಿರುವ ಶ್ರೀ ಜಯಲಕ್ಷ್ಮೀ ದೇವಸ್ಥಾನ ಹಾಗೂ ಶಬರಿ ಗುಹೆ ಮುಂತಾದ ಪ್ರಸಿದ್ಧ ತಾಣಗಳಿವೆ. ಶ್ರೀ ರಾಮನ ದರ್ಶನಕ್ಕಾಗಿ ಶಬರಿ ಕಾದು ಕುಳಿತಿದ್ದು, ನಂತರ ಶ್ರೀರಾಮನ ದರ್ಶನದಿಂದ ಜನ್ಮ ಪಾವನಗೊಳಿಸಿಕೊಂಡಿದ್ದು ಇದೇ ಸ್ಥಳದಲ್ಲಿ ಎಂಬ ಐತಿಹ್ಯವಿದೆ. ಪವಿತ್ರ ಪಂಪಾಸರೋವರವನ್ನು ವೀಕ್ಷಿಸಲು ಪ್ರತಿ ವರ್ಷ ಉತ್ತರ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಂಜನಾದ್ರಿ ಬೆಟ್ಟಕ್ಕೆ ಭಕ್ತಿ ಭಾವದೊಂದಿಗೆ ಆಗಮಿಸುವ ಭಕ್ತರ ದಂಡು ಒಂದೆಡೆಯಾದರೆ, ಇಲ್ಲಿನ ಪೌರಾಣಿಕ ಹಿನ್ನೆಲೆಯನ್ನು ಓದಿ ತಿಳಿದುಕೊಂಡ ವಿದೇಶಿ ಪ್ರವಾಸಿಗರು, ಈ ಬೆಟ್ಟಕ್ಕೆ ಭೇಟಿ ನೀಡಲು ಕುತೂಹಲದಿಂದ ದೌಡಾಯಿಸುತ್ತಾರೆ. ಅಂಜನಾದ್ರಿ ಪರ್ವತ ಪ್ರದೇಶವೆಂದರೆ ರಾಮಾಯಣದ ಶ್ರೀ ಆಂಜನೇಯ ಹುಟ್ಟಿ ಬೆಳೆದ ಪ್ರದೇಶವೆಂದೇ ಎಲ್ಲರ ನಂಬಿಕೆ. ಇದರಿಂದಾಗಿಯೇ ಭಕ್ತಿ ಭಾವದೊಂದಿಗೆ ಈ ಬೆಟ್ಟಕ್ಕೆ ಭೇಟಿ ನೀಡುವರ ಸಂಖ್ಯೆ ವೃದ್ಧಿಸಲು ಕಾರಣವಾಗಿದೆ.
ಆನೆಗೊಂದಿಗೆ ಆಗಮಿಸಿದ ಪ್ರವಾಸಿಗರು ನೋಡಲೇ ಬೇಕಾದ ಪ್ರಮುಖ ಧಾರ್ಮಿಕ ಕ್ಷೇತ್ರವೆಂದರೆ "ನವ ವೃಂದಾವನ". ಆನೆಗೊಂದಿ ಬಳಿಯ ತುಂಗಭದ್ರಾ ನದಿಯ ತಟದಿಂದ ಸ್ವಲ್ಪ ದೂರದಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ "ನವ ವೃಂದಾವನ" ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಪುಣ್ಯ ಕ್ಷೇತ್ರದ ದರ್ಶನ ಪಡೆಯುತ್ತಾರೆ.
ಆನೆಗೊಂದಿ ಪ್ರದೇಶವು ಪೌರಾಣಿಕ ಹಾಗೂ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದ್ದು, ಇಲ್ಲಿನ ಗತ ವೈಭವವನ್ನು ಮೆಲುಕು ಹಾಕುವುದು, ಪೌರಾಣಿಕ ಹಿನ್ನೆಲೆ, ಚಾರಿತ್ರಿಕ ಘಟನೆಗಳನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ನಾಡಿಗೆ ಪ್ರಚುರಪಡಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾಡಳಿತ ಆನೆಗೊಂದಿ ಉತ್ಸವವನ್ನು ಇದೇ ಮಾರ್ಚ್ ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಈಗಾಗಲೆ ಸಿದ್ಧತೆಗಳು ಭರದಿಂದ ಸಾಗಿದ್ದು, ತಯಾರಿಗಳು ಅಂತಿಮ ಹಂತ ತಲುಪಿವೆ. ಆನೆಗೊಂದಿ ಉತ್ಸವದ ಯಶಸ್ಸಿಗೆ ಈ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು.

- ತುಕಾರಾಂ ರಾವ್ ಬಿ.ವಿ.,
No comments:
Post a Comment