ಆನೆಗೊಂದಿ ಉತ್ಸವದ ಅಂಗವಾಗಿ ವಿಚಾರವಾದಿಗಳ, ಸಂಶೋಧಕರನ್ನು ಚಿಂತನ-ಮಂಥನಕ್ಕೆ ಹಚ್ಚಿಸುವಂತೆ ವಿಚಾರ ಸಂಕಿರಣ, ಕವಿತೆಯಲ್ಲಿ ಕಲ್ಪನೆಯನ್ನು ಸೃಷ್ಠಿಸುವಂತಹ ಕವಿ ಕಾವ್ಯ ಜೊತೆಗೆ ಅದಕ್ಕೆ ರೂಪ ನೀಡುವ ಕುಂಚ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.
ಮಾ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿ ಗ್ರಾಮದಲ್ಲಿ ನಿರ್ಮಿಸಿರುವ ಕುಪ್ಪಮ್ಮ ರಾಣಿ ವೇದಿಕೆಯಲ್ಲಿ ಆನೆಗೊಂದಿ ಇತಿಹಾಸ ಮತ್ತು ಸಂಸ್ಕೃತಿ ಕುರಿತಂತೆ ವಿಶೇಷ ವಿಚಾರಸಂಕಿರಣ ಏರ್ಪಡಿಸಲಾಗಿದ್ದು, ಪ್ರೊ. ಲಕ್ಷ್ಮಣ ತೆಲಗಾವಿ ಅವರು ವಿಚಾರಸಂಕಿರಣದ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಅವರಿಂದ ಆಶಯದ ನುಡಿ, ನಂತರ ಗಂಗಾವತಿಯ ಕೆ.ಎಸ್.ಸಿ. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಅವರು ಆನೆಗೊಂದಿ, ರಾಜಕೀಯ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡನೆ ಮಾಡುವರು. ಜೊತೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ಕೊಟ್ರೇಶ್ ಅವರು ಆನೆಗೊಂದಿ, ಸಾಂಸ್ಕೃತಿ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡಿಸುವರು. ಕಾರ್ಯಕ್ರಮದಲ್ಲಿ ಗಂಗಾವತಿಯ ಹೆಚ್.ಆರ್.ಎಸ್.ಎಂ. ಕಾಲೇಜಿನ ಉಪನ್ಯಾಸಕ ಪ್ರೊ. ಎಫ್.ಎಚ್. ಚಿತ್ರಗಾರ, ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಡಾ. ನಾರಾಯಣ ಕಂದಗಲ್, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ಕುಕನೂರಿನ ಹೊಸಮನಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಪವನಕುಮಾರ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾ. ೨೪ ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಯುವ ಕವಿ ಕಾವ್ಯ ಕುಂಚ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬಾಗಲಕೋಟೆಯ ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದಲ್ಲಿ ಕವಿಗಳಾದ ಸಲೀಮಾ ಎಂ. ಮಂಗಳೂರು, ರಮೇಶ್ ಗಬ್ಬೂರ, ಜಿ.ಎಸ್. ಗೋನಾಳ, ಸಿರಾಜ್ ಬಿಸರಳ್ಳಿ, ಈಶಪ್ಪ ಮಳಗಿ, ಎನ್. ಜಡಿಯಪ್ಪ, ನಟರಾಜ ಸೋನಾರ, ಸೋಮು ಕುದರಿಹಾಳ, ಸತೀಶ ಎಚ್.ಆರ್., ಮಮ್ತಾಜ್ ಬೇಗಂ, ರುದ್ರಮ್ಮ ಆಶಿನಾಳ, ಆಂಜನೇಯ ಟಿ., ರವೀಂದ್ರ ಬಾಕಳೆ ಅವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಗಾಯಕರುಗಳಾದ ದೊಡ್ಡಯ್ಯ ವಿ. ಕಲ್ಲೂರ, ಕೆ.ಎಫ್. ಮುದ್ದಾಬಳ್ಳಿ, ಹಣಮಂತರಾವ್ ಕುಲಕರ್ಣಿ, ವೆಂಕಟೇಶ ದಾಸನಾಳ, ಜುಜ್ಜವರಪು ನಾಗೇಶ್ವರರಾವ್, ಹಂದ್ರಾಳ ವಿಶ್ವನಾಥ, ಶಿವಪ್ಪ ಹುಳ್ಳ, ಸುರಯ್ಯ ಬೇಗಮ್ ಮುದ್ದಾಬಳ್ಳಿ, ಎಸ್.ಎಸ್.ಎಂ. ರುದ್ರಾಣಿ ಕಂಪ್ಲಿ, ವಿದ್ಯಾಶ್ರೀ ಸಾಲಮಠ, ಗೀತಾ ಕಾಶೆಟ್ಟಿ, ಮತ್ತು ಛತ್ರಪ್ಪ ತಂಬೂರಿ ಅವರು ಭಾಗವಹಿಸುವರು. ಕವಿಗಳ ಕಾವ್ಯಕ್ಕೆ ಗಾಯಕರು ಜೀವ ನೀಡಿದರೆ, ಅದಕ್ಕೆ ರೂಪ ನೀಡಲು ಕುಂಚ ಕಲಾವಿದರುಗಳಾದ ಚಂದ್ರಶೇಖರ ಕಲ್ಮನಿ, ಜಿ.ಕೆ. ಬಡಿಗೇರ, ಅಣ್ಣಪ್ಪ ಚಿತ್ರಗಾರ, ವೀರಾಚಾರಿ ಕಮ್ಮಾರ, ಮಲ್ಲಿಕಾರ್ಜುನ ಸುರತಾನಿ, ಪ್ರಶಾಂತ, ಯಶೋಧಾ ಪತ್ತಾರ, ಸಾಗರ ಚಿತ್ರಗಾರ ಹಾಗೂ ಹನಿರಾಜ ಅವರು ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ಕಸಾಪ ಗಂಗಾವತಿ ತಾಲೂಕು ಅಧ್ಯಕ್ಷ ಬಸವರಾಜ ಕೋಟೆ ಅವರ ಸಂಯೋಜನೆಯಿದ್ದು, ಕೊಪ್ಪಳ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.
Blogroll
Monday, March 21, 2011
ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು
ಆನೆಗೊಂದಿ ಉತ್ಸವ : ವೈವಿಧ್ಯಮಯ ಕಲಾ ತಂಡಗಳ ಜಾನಪದ ವಾಹಿನಿ
ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿಯ ಶ್ರೀ ದುರ್ಗಾದೇವಿ ದೇವಸ್ಥಾನ ಬಳಿಯಿಂದ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯವರೆಗೆ ವೈವಿಧ್ಯಮಯ ಜಾನಪದ ಕಲಾತಂಡಗಳಿಂದ ಆಕರ್ಷಕ ಜಾನಪದ ವಾಹಿನಿ ಅನಾವರಣಗೊಳ್ಳಲಿದೆ.
ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿ ರಾಜ ವಂಶಸ್ಥರಿಂದ ಶ್ರೀ ದುರ್ಗಾದೇವಿ ಹಾಗೂ ಆನೆ ಅಂಬಾರಿಗೆ ಪೂಜೆ ನೆರವೇರಿಸುವುದರೊಂದಿಗೆ ಜಾನಪದ ಕಲಾವಾಹಿನಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ಮೆರವಣಿಗೆ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಮುಖ್ಯ ವೇದಿಕೆಯಾದ ಶ್ರೀ ಪ್ರೌಢದೇವರಾಯ ವೇದಿಕೆಯವರೆಗೆ ವೈವಿಧ್ಯಮಯ ಜಾನಪದ ಕಲಾ ತಂಡದೊಂದಿಗೆ ಸಾಗಲಿದೆ. ಜಾನಪದ ಕಲಾವಾಹಿನಿಯ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಉದ್ಘಾಟಿಸುವರು. ಜಾನಪದ ಕಲಾವಾಹಿನಿಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಕಲಾವಾಹಿನಿಯಲ್ಲಿ ಮುಂಚೂಣಿಯಲ್ಲಿದ್ದರೆ, ವಿವಿಧ ಜಾನಪದ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಜಾನಪದ ಕಲಾವಾಹಿನಿಯಲ್ಲಿ ಭಾಗವಹಿಸುವ ವಿವಿಧ ಕಲಾ ತಂಡಗಳ ವಿವರ ಇಂತಿದೆ. ರಾಮನಗರದ ಶಿವಣ್ಣ ಮತ್ತು ತಂಡದಿಂದ ಪೂಜಾ ಕುಣಿತ, ದಾವಣಗೆರೆಯ ಮಂಜಣ್ಣ ಮತ್ತು ತಂಡದಿಂದ ಡೊಳ್ಳು ಕುಣಿತ, ಶಿವಮೊಗ್ಗದ ಅರ್ಚನಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ತುಮಕೂರಿನ ಹೊಸಳಯ್ಯ ಹಾಗೂ ತಂಡದಿಂದ ವೀರಭದ್ರ ಕುಣಿತ, ಮಂಡ್ಯದ ಸತೀಶ್ ಕುಮಾರ ಮತ್ತು ತಂಡದಿಂದ ಗಾರುಡಿ ಗೊಂಬೆ, ದಂಡಿನಶಿವರದ ಡಿ.ಎಸ್. ಗಂಗಾಧರ ಗೌಡ ತಂಡದಿಂದ ಸೋಮನ ಕುಣಿತ, ಶ್ರೀರಂಗಪಟ್ಟಣದ ಕೊಡಿಯಾಲಸಿದ್ದೇಗೌಡ ತಂಡದಿಂದ ಪಟ ಕುಣಿತ, ಕೆರೂರಿನ ಕುಶಾಲಪ್ಪ ತಂಡದಿಂದ ಏಕತಾರಿ ಭಜನೆ, ತುಮಕೂರಿನ ವಿಶ್ವನಾಥ ಮತ್ತು ಸಂಗಡಿಗರಿಂದ ಚಿಟ್ಟಿಮೇಳ, ಬೆಂಗಳೂರಿನ ಮಹದೇವ ತಂಡದಿಂದ ಕಂಸಾಳೆ, ಹಾವೇರಿ ಜಿಲ್ಲೆ ಲಿಂಗದಳ್ಳಿಯ ಮಹೇಶ್‌ಗೌಡ ತಂಡದಿಂದ ಸಂಬಾಳ ವಾದನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆಂಕಟೇಶ್ ತಂಡದಿಂದ ತಮಟೆವಾದ್ಯ, ದಾವಣಗೆರೆಯ ವಿ. ಉಮೇಶ ತಂಡದಿಂದ ನಗಾರಿ ವಾದ್ಯ, ಜಗಳೂರಿನ ಲಿಂಬ್ಡಿಬಾಯಿ ತಂಡದಿಂದ ಲಂಬಾಣಿ ನೃತ್ಯ, ಇಟಗಿಯ ಪ್ಯಾಟಿ ಬಸವೇಶ್ವರ ಜಾನಪದ ಕಲಾಸಂಘದ ಸಿದ್ದಲಿಂಗಯ್ಯ ಚೌಡಿ ಅವರಿಂದ ಕರಡಿ ಮಜಲು, ಕೊಪ್ಪಳದ ಕರ್ನಾಟಕ ಬ್ರಾಸ್ ಬ್ಯಾಂಡ್ ಕಂಪನಿಯ ಪ್ರಕಾಶ ಭಜಂತ್ರಿ ತಂಡದಿಂದ ಬ್ಯಾಂಜೋಮೇಳ, ಬಿಜಾಪುರದ ಸುರೇಶ ಭಜಂತ್ರಿ ತಂಡದಿಂದ ಖಣಿ ಹಲಿಗೆ, ಕಿನ್ನಾಳದ ಕಾಶಿವಿಶ್ವನಾಥ ತಂಡದಿಂದ ಕರಡಿ ಮಜಲು, ಶಿವಪುರದ ಹನುಮಂತಪ್ಪ ಮಾಸ್ತರ್ ತಂಡದಿಂದ ಬ್ಯಾಂಜೋ ಮೇಳ, ಹನುಮಾಪುರದ ಕೆಂಚಪ್ಪ ಫಕೀರಪ್ಪ ಕುರಿ ತಂಡದಿಂದ ಡೊಳ್ಳು ಕುಣಿತ, ಕೊಪ್ಪಳದ ಬಸವೇಶ್ವರ ಜಾನಪದ ಕಲಾ ತಂಡದಿಂದ ಹಲಿಗೆ ಮೇಳ, ನಾವಲಗಿಯ ಮಲ್ಲಪ್ಪ ಹೂಗಾರ ಮತ್ತು ತಂಡದಿಂದ ಸಂಭಾಳ ವಾದನ, ಕೂಡ್ಲಿಗಿಯ ವೀಣಾ ಕಲಾ ಸಂಘದಿಂದ ಮಹಿಳಾ ಭಜನೆ, ಬಳ್ಳಾರಿಯ ಮೋಹನ ಮತ್ತು ತಂಡದಿಂದ ತಾಷರಂಡೋಲ, ವೀರಯ್ಯ ಸಂಶಿಮಠ ಅವರಿಂದ ವೀರಗಾಸೆ, ಗಂಗಾವತಿಯ ವೀರಣ್ಣ ಮರಿಯಪ್ಪ ನಾಗಲೀಕರ ತಂಡದಿಂದ ಸಮಾಳ ವಾದನ, ಮರಿಯಮ್ಮನಹಳ್ಳಿಯ ಮಾತಾ ಮಂಜಮ್ಮ ಜೋಗತಿ ತಂಡದಿಂದ ಜೋಗತಿ ಕುಣಿತ ಹೀಗೆ ಹತ್ತು ಹಲವು ವೈವಿಧ್ಯಮಯ ತಂಡಗಳು ಜಾನಪದ ವಾಹಿನಿಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದು ಜಾನಪದ ರಸದೌತಣ ಸವಿಯಬಹುದಾಗಿದೆ
ಎರಡು ವೇದಿಕೆಗಳಲ್ಲೂ ಆಕರ್ಷಕ ಕಾರ್ಯಕ್ರಮಗಳು
ಆನೆಗೊಂದಿ ಉತ್ಸವ ಅಂಗವಾಗಿ ಆನೆಗೊಂದಿಯ ಹೊರವಲಯ ಬಳಿ ನಿರ್ಮಿಸಲಾಗಿರುವ ಶಾಶ್ವತ ವೇದಿಕೆಯಲ್ಲಿ ಮುಖ್ಯವೇದಿಕೆಯಾಗಿ "ಶ್ರೀ ಪ್ರೌಢದೇವರಾಯ ವೇದಿಕೆ" ಹಾಗೂ ಆನೆಗೊಂದಿಯ ಗ್ರಾಮದ ಒಳಗೆ ನಿರ್ಮಿಸಿರುವ ಎರಡನೆ ವೇದಿಕೆ "ಕುಪ್ಪಮ್ಮ ರಾಣಿ ವೇದಿಕೆ" ಸೇರಿದಂತೆ ಒಟ್ಟು ೦೨ ವೇದಿಕೆಗಳನ್ನು ನಿರ್ಮಿಸಲಾಗಿದೆ.
ಮಾ. ೨೩ ರಂದು ಸಂಜೆ ೪ ಗಂಟೆಗೆ ಮುಖ್ಯ ವೇದಿಕೆಯಾದ "ಶ್ರೀ ಪ್ರೌಢದೇವರಾಯ ವೇದಿಕೆ"ಯಲ್ಲಿ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ವೇದಮೂರ್ತಿ ಶ್ರೀ ಕಲ್ಲಯ್ಯ ಅಜ್ಜನವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ವಿಜಯನಗರ ಸಾಮ್ರಾಜ್ಯದ ಮಾತೃ ಸ್ಥಾನ ’ಆನೆಗೊಂದಿ’ ಗ್ರಂಥ ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಹಾಗೂ ಜವಳಿ ಸಚಿವ ಗೋವಿಂದ ಕಾರಜೋಳ ಅವರು ಆನೆಗೊಂದಿ ಕುರಿತ ಮಾಹಿತಿ ಪುಸ್ತಕ ಬಿಡುಗಡೆ ಮಾಡುವರು. ಪ್ರವಾಸೋದ್ಯಮ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಯುವಜನ ಸೇವಾ ಸಚಿವ ಜಿ. ಜನಾರ್ಧನ ರೆಡ್ಡಿ ಅವರು ಇದೇ ಸಂದರ್ಭದಲ್ಲಿ ಶ್ರೀಕೃಷ್ಣದೇವರಾಯರ ಕಂಚಿನ ಪುತ್ಥಳಿ ಅನಾವರಣಗೊಳಿಸುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲ, ಡಾ: ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುನೀಲ ವಲ್ಲ್ಯಾಪುರ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಜಿ.ಪಂ. ಅಧ್ಯಕ್ಷೆ ಜ್ಯೋತಿ ನಾಗರಾಜ ಬಿಲ್ಗಾರ್, ಸಂಸದ ಶಿವರಾಮಗೌಡ, ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಈಶಣ್ಣ ಗುಳಗಣ್ಣವರ್, ಶಶಿಲ್ ಜಿ. ನಮೋಶಿ, ಹೆಚ್.ಸಿ. ನೀರಾವರಿ, ಮನೋಹರ ಮಸ್ಕಿ, ಹಾಲಪ್ಪ ಆಚಾರ್, ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ, ತಾ.ಪಂ., ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಗಣ್ಯಾತಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಶಿವರಾಜ್‌ಕುಮಾರ್ ಅವರು ಪಾಲ್ಗೊಳ್ಳಲಿದ್ದು, ಮಾಜಿ ಸಂಸದ ಹೆಚ್.ಜಿ. ರಾಮುಲು, ಆನೆಗೊಂದಿ ರಾಜವಂಶಸ್ಥರಾದ ಶ್ರೀರಂಗದೇವರಾಯಲು, ರಾಜಾ ರಾಮದೇವರಾಯಲು, ರಾಜಾ ನರಸಿಂಹದೇವರಾಯಲು, ಕೃಷ್ಣದೇವರಾಯಲು ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಮಾ. ೨೩ ಹಾಗೂ ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದ್ದು, ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕರಾದ ಬೆಂಗಳೂರಿನ ಅಜಯ್ ವಾರಿಯರ್ ಹಾಗೂ ಸಂಗಡಿಗರು, ರಾಜೇಶ್ ಕೃಷ್ಣನ್, ಹೇಮಂತ್, ಚೈತ್ರ, ಬಿ.ಕೆ. ಸುಮಿತ್ರಾ, ಚಲನಚಿತ್ರ ನಟ, ನಟಿಯರಾದ ಯಶ್, ಅನಿರುದ್ಧ್, ರಾಗಿಣಿ, ಹರಿಪ್ರಿಯ, ನೀತು, ಯಜ್ಞಾಶೆಟ್ಟಿ, ಹರೀಶ್ ಮುಂತಾದವರಿಂದ ಸಂಗೀತ ಹಾಗೂ ನೃತ್ಯ ವೈವಿಧ್ಯ, ಗಂಗಾವತಿಯ ಬಿ. ಪ್ರಾಣೇಶ್ ಅವರಿಂದ ಹಾಸ್ಯೋತ್ಸವ ಸೇರಿದಂತೆ, ಹರಿಯಾಣ, ಪಂಜಾಬ್, ಉತ್ತರಪ್ರದೇಶ, ರಾಜಸ್ಥಾನ ಮುಂತಾದ ವಿವಿಧ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.
ಪೌರಾಣಿಕ, ಐತಿಹಾಸಿಕ ಪ್ರಸಿದ್ಧ ಆನೆಗೊಂದಿ





ತುಂಗಭದ್ರಾ ನದಿಯ ತಟದಲ್ಲಿರುವ ಕಲ್ಲು, ಗುಡ್ಡಗಳ ಪ್ರದೇಶಗಳ ನಡುವೆ ಇರುವ ಆನೆಗೊಂದಿ ಎಂಬ ಪುಟ್ಟ ಗ್ರಾಮದ ಬಳಿ ಅಲ್ಲಲ್ಲಿ ಕಾಣಸಿಗುವ ಹಲವಾರು ಸ್ಮಾರಕಗಳು, ರಾಮಾಯಣ ಸೇರಿದಂತೆ ವಿಜಯನಗರ ಸಾಮ್ರಾಜ್ಯದ ಗತವೈಭವಕ್ಕೆ ಸಾಕ್ಷಿಯಾಗಿವೆ. ಈ ಭಾಗದ ಅಂಜನಾದ್ರಿ ಪರ್ವತ, ಪಂಪಾ ಸರೋವರ, ಋಷ್ಯಮುಖ ಪರ್ವತ, ಗಗನ ಮಹಲ್, ಚಿಂತಾಮಣಿ, ದುರ್ಗಾದೇವಿ ಮಂದಿರ ಮುಂತಾದವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ರಾಮಾಯಣದಲ್ಲಿ ಬರುವ ವಾನರ ಸಾಮ್ರಾಜ್ಯ ಕಿಷ್ಕಿಂದೆ, ಈಗಿನ ಆನೆಗೊಂದಿ ಭಾಗದ ಪ್ರದೇಶವೇ ಆಗಿದೆ ಎನ್ನುತ್ತವೆ ಪೌರಾಣಿಕ ಕಥೆಗಳು, ಕಿಷ್ಕಿಂದೆ ಎಂದರೆ ಕಿರಿದಾದ, ಇಕ್ಕಟ್ಟಾದ ಎನ್ನುವ ಅರ್ಥವಿದೆ. ಹಂಪಿಯ ಪರಿಸರದಲ್ಲಿನ ಆನೆಗೊಂದಿಯನ್ನು ವೀಕ್ಷಿಸಿದರೆ, ಇಲ್ಲಿನ ಬೆಟ್ಟ, ಗುಡ್ಡ, ಕಲ್ಲುಗಳಿಂದ ಆವೃತವಾಗಿ ಇಕ್ಕಟ್ಟಾಗಿದೆ ಎನಿಸದೇ ಇರದು. ಕಣ್ಣಿಗೆ ಕಾಣುವಷ್ಟು ದೂರದವರೆಗೂ ಕಲ್ಲು, ಗುಡ್ಡಗಳ ಸಾಲುಗಳು, ಚಿತ್ರ ವಿಚಿತ್ರಾಕೃತಿಯ ಬೃಹತ್ ಗಾತ್ರದ ಕಲ್ಲು ಗುಂಡುಗಳು, ಎಲ್ಲಿ ಕುಸಿದು ಬೀಳುತ್ತವೆಯೋ ಎನ್ನುವಂತೆ ಕಾಣಿಸಿದರೂ, ಅಲ್ಲಲ್ಲಿ ಜೋಡಿಸಿಟ್ಟಿರುವಂತೆ ಕಾಣುವ ದೊಡ್ಡ ದೊಡ್ಡ ಕಲ್ಲು ಬಂಡೆಗಳು, ಇವೆಲ್ಲದರ ಮಧ್ಯೆ ಹರಿವ ತುಂಗಭದ್ರಾ ನದಿ. ಇವೆಲ್ಲವೂ ಸೇರಿ ಇಡೀ ಆನೆಗೊಂದಿ ಪ್ರದೇಶವನ್ನು ಒಂದು ರೀತಿಯಲ್ಲಿ ನೈಸರ್ಗಿಕ ವಿಸ್ಮಯ ಸೃಷ್ಟಿಯಾಗಿಸಿದೆ. ಅಲ್ಲದೆ ಈ ಭಾಗದ ಪರಿಸರ ಮನಸ್ಸಿಗೆ ಮುದ ನೀಡುತ್ತದೆ. ಇವೆಲ್ಲ ಕಾರಣಗಳಿಗಾಗಿಯೇ ಆನೆಗೊಂದಿ ಭಾಗಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ.
ಆನೆಗೊಂದಿಯನ್ನು ಕೆಲವರು ಆನೆಗುಂದಿ ಎಂಬುದಾಗಿಯೂ ಕರೆಯುತ್ತಾರೆ. ಆದರೆ ಆನೆಗೊಂದಿ ಎಂಬುದೇ ಸೂಕ್ತ ಹಾಗೂ ಸರಿಯಾದ ಹೆಸರಾಗಿದೆ ಎಂಬುದು ತಜ್ಞರ ವಾದ. ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಗ್ರಾಮದ ನಾಲ್ಕು ದಿಕ್ಕುಗಳಿಗೂ ನಾಲ್ಕು ಮುಖ್ಯ ದ್ವಾರಗಳಿವೆ. ಈ ಪೈಕಿ ಸದ್ಯ ಎರಡು ದ್ವಾರಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಉಳಿದೆರಡು ಶಿಥಿಲಾವಸ್ಥೆಗೆ ತಲುಪಿವೆ. ಇಲ್ಲಿನ ಶ್ರೀರಂಗನಾಥ ಸ್ವಾಮಿಯ ವಿಶಾಲ ದೇವಾಲಯವಿದ್ದು, ಪ್ರವೇಶದ್ವಾರ, ನೃತ್ಯಮಂಟಪ, ಗರ್ಭಗುಡಿ, ಪ್ರವಾಸಿಗರಲ್ಲಿ ಭಕ್ತಿಯ ಭಾವ ಮೂಡಿಸುತ್ತದೆ. ಆನೆಗೊಂದಿ ಗ್ರಾಮವನ್ನು ಪ್ರವೇಶಿದರೆ, ಇಲ್ಲಿಯೇ ಸ್ವಲ್ಪ ದೂರದಲ್ಲಿ ಇರುವ ಗಗನ ಮಹಲ್ ನೋಡಲು ಆಕರ್ಷಕವಾಗಿದೆ. ಇಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಕೂಡಲೆ ತೆರವುಗೊಳಿಸುವಂತೆ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯೆಲ್ ಅವರು ಇತ್ತೀಚೆಗೆ ಆನೆಗೊಂದಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಆನೆಗೊಂದಿ ಗ್ರಾಮದ ಪಕ್ಕದಲ್ಲಿಯೇ ಇರುವ ಬೃಹತ್ ಪರ್ವತದಲ್ಲಿ ಶ್ರೀ ದುರ್ಗಾ ದೇವಿಯ ದೇವಸ್ಥಾನವಿದ್ದು, ಹಬ್ಬ, ಹರಿದಿನಗಳಲ್ಲಿ, ಅಮಾವಸ್ಯೆ, ಹುಣ್ಣಿಮೆಯ ದಿನಗಳಂದು, ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕ. ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಹಾಗೂ ಆಕರ್ಷಕವಾಗಿರುವ ಆನೆಗೊಂದಿ ಕೋಟೆಯ ಮಹಾದ್ವಾರ ಇಲ್ಲಿಯೇ ಸಮೀಪದಲ್ಲಿದೆ. ಇದು ಪ್ರವಾಸಿಗರ ಆಕರ್ಷಣೀಯ ಕೇಂದ್ರವೂ ಕೂಡ ಆಗಿದೆ. ಇಲ್ಲಿಂದ ಸ್ವಲ್ಪ ದೂರ ಕ್ರಮಿಸಿದರೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನೆಗಳನ್ನು ಕಟ್ಟಿ ಹಾಕುತ್ತಿದ್ದ ಆನೆಲಾಯ ಮತ್ತು ಕುದುರೆಲಾಯಗಳನ್ನು ವೀಕ್ಷಿಸಬಹುದಾಗಿದೆ.
ಆನೆಗೊಂದಿಗೆ ಆಗಮಿಸಿದ ಪ್ರವಾಸಿಗರು ನೋಡಲೇ ಬೇಕಾದ ಪ್ರಮುಖ ಧಾರ್ಮಿಕ ಕ್ಷೇತ್ರವೆಂದರೆ "ನವ ವೃಂದಾವನ". ಆನೆಗೊಂದಿ ಬಳಿಯ ತುಂಗಭದ್ರಾ ನದಿಯ ತಟದಿಂದ ಸ್ವಲ್ಪ ದೂರದಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ "ನವ ವೃಂದಾವನ" ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಪುಣ್ಯ ಕ್ಷೇತ್ರದ ದರ್ಶನ ಪಡೆಯುತ್ತಾರೆ.
ಆನೆಗೊಂದಿ ಪ್ರದೇಶವು ಪೌರಾಣಿಕ ಹಾಗೂ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದ್ದು, ಇಲ್ಲಿನ ಗತ ವೈಭವವನ್ನು ಮೆಲುಕು ಹಾಕುವುದು, ಪೌರಾಣಿಕ ಹಿನ್ನೆಲೆ, ಚಾರಿತ್ರಿಕ ಘಟನೆಗಳನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ನಾಡಿಗೆ ಪ್ರಚುರಪಡಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾಡಳಿತ ಆನೆಗೊಂದಿ ಉತ್ಸವವನ್ನು ಇದೇ ಮಾರ್ಚ್ ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಈಗಾಗಲೆ ಸಿದ್ಧತೆಗಳು ಭರದಿಂದ ಸಾಗಿದ್ದು, ತಯಾರಿಗಳು ಅಂತಿಮ ಹಂತ ತಲುಪಿವೆ. ಆನೆಗೊಂದಿ ಉತ್ಸವದ ಯಶಸ್ಸಿಗೆ ಈ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು.
Friday, February 25, 2011
ಸುಸ್ವಾಗತ
ತಮಗೆಲ್ಲರಿಗೂ ಸುಸ್ವಾಗತ
ಕನ್ನಡನೆಟ್.ಕಾಂ ಬಳಗ
